ಇಂದು ಭಾರತ-ಪಾಕ್ ‘ವಿಶ್ವ’ಯುದ್ಧ
ಮೊಹಾಲಿ: ವಿಶ್ವಕಪ್‌ನ ಫೈನಲಿಗೇರಲು ಇಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಕಾದಾಡಲಿದ್ದು, ಎರಡೂ ರಾಷ್ಟ್ರಗಳ ಜನರು ಮೂರು ವರ್ಷಗಳ ಬಳಿಕ ಪರಸ್ಪರ ಎದುರಾಗಲಿರುವ ಬದ್ಧವೈರಿಗಳ ಹೋರಾಟವನ್ನು ನೋಡಲು ತುದಿ ಗಾಲಲ್ಲಿ ನಿಂತಿದ್ದಾರೆ.
ಭಾರೀ ಭದ್ರತೆಯ ಮಧ್ಯೆ ಮೊಹಾಲಿಯ ಸ್ಟೇಡಿಯಂನಲ್ಲಿ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಇದನ್ನು ವಿಶ್ವಕಪ್‌ನ ಹೈವೋಲ್ಟೆಜ್ ಪಂದ್ಯವೆಂದೇ ಪರಿಗಣಿಸಲಾಗಿದೆ. ಆಸೀಸ್‌ನ್ನು ಮಣಿಸಿದ ಧೋನಿ ಪಡೆ ಮತ್ತು ವಿಂಡೀಸ್‌ನ್ನು ಸದೆಬಡಿದ ಅಫ್ರಿದಿ ಬಳಗ ಫೈನಲಿಗೇರುವ ಹುಮ್ಮಸ್ಸಿನಲ್ಲಿ ಮೈದಾನಕ್ಕಿಳಿಯಲಿದೆ.
ಅನುಭವಿ ಓಪನರ್‌ಗಳಾದ ಸಚಿನ್ ಹಾಗೂ ಸೆಹ್‌ವಾಗ್ ಮೇಲೆ ತಂಡ ಅತಿಯಾದ ನಿರೀಕ್ಷೆ ಇಟ್ಟಿದ್ದರೆ ಮಧ್ಯಮ ಕ್ರಮಾಂಕಕ್ಕೆ ಯೂವಿಯ ಆಧಾರವಿದೆ. ನಾಯಕ ಧೋನಿ ಬ್ಯಾಟಿಂಗ್‌ನಲ್ಲಿ ನೆಲೆ ಕಂಡುಕೊಳ್ಳುವಲ್ಲಿ ವಿಫಲವಾಗಿರುವುದು ದೊಡ್ಡ ವಿಷಯವೇ ಸರಿ. ಆದರೆ ರೈನಾ ಮರಳಿರುವುದು ಆ ಸ್ಥಾನವನ್ನು ಬಲಿಷ್ಟಗೊಳಿಸಿದೆ. ಬೌಲಿಂಗ್‌ನಲ್ಲಿ ಸ್ವಲ್ಪ ಮಟ್ಟಿನ ಹಿಡಿತವನ್ನು ಸಾಧಿಸಿದ್ದು ಸಮಾಧಾನದ ಸಂಗತಿ. ಜಹೀರ್ ತನ್ನ ಎಂದಿನ ಅದ್ಬುತ ಫಾರ್ಮ್ ನಲ್ಲಿದ್ದರೆ ಹರ್ಭಜನ್ ಇನ್ನೂ ನೈಜ ಫಾರ್ಮ್ ಮರಳಿಲ್ಲ. ಅಶ್ವಿನ್ ಇಲ್ಲವೇ ಶ್ರೀಶಾಂತ್‌ಗೆ ಸ್ಥಾನ ಲಭಿಸುವ ಸಾಧ್ಯತೆ ಯಿದೆಯಾದರೂ ಯೂಸುಫ್ ಆಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸೆಹವಾಗ್, ಸಚಿನ್, ಗಂಭೀರ್, ಯುವರಾಜ್ ಹಾಗೂ ಜಹೀರ್ ಭಾರತದ ಪ್ರಮುಖ ಟ್ರಂಪ್ ಕಾರ್ಡ್‌ಗಳಾಗಿದ್ದಾರೆ.
ಬಲಿಷ್ಟ ಬೌಲಿಂಗ್‌ಗೆ ನಮ್ಮ ಅಸ್ತ್ರ ಎಂದು ಪಾಕ್ ವಾದವನ್ನು ಒಪ್ಪಿಕೊಳ್ಳಬೇಕಿದೆ. ಸ್ವತಃ ನಾಯಕ ಅಫ್ರಿದಿ (೨೧) ಈ ವಿಭಾಗದಲ್ಲಿ ಸಾರಥ್ಯ ವಹಿಸಿ ಕೂಟದಲ್ಲಿ ಗರಿಷ್ಟ ವಿಕೆಟ್ ಪಡೆದಿದ್ದಾರೆ. ಇನ್ನುಳಿದಂತೆ ಅನುಭವಿ ಅಜ್ಮಲ್ ಕೂಡ ಬಲ ತುಂಬಲಿದ್ದಾರೆ. ಗುಲ್, ರಜಾಕ್‌ರಂಥ ಅನುಭವಿ ವೇಗಿಗಳನ್ನೂ ಅದು ಹೊಂದಿದ್ದು ಸಾಮರ್ಥ್ಯವನ್ನು ಹೆಚ್ಚಿಸಿದೆ. ಕೊನೆಯ ವಿಶ್ವಕಪ್ ಆಡುತ್ತಿರುವ ಅಖ್ತರ್‌ಗೆ ಸ್ಥಾನ ಲಭಿಸುವ ಸಾಧ್ಯತೆಯಿದೆ. ಇದರೊಂದಿಗೆ ಉತ್ತಮ ಮಧ್ಯಮ ಕ್ರಮಾಂಕವನ್ನೂ ಕೂಡ ಪಾಕ್ ಹೊಂದಿದೆ. ಪಾಕ್‌ಗೆ ಅಫ್ರಿದಿ, ಗುಲ್, ಮಿಸ್ಬಾ, ಅಜ್ಮಲ್, ಉಮರ್ ಅಕ್ಮಲ್ ಪ್ರಮುಖ ಅಸ್ತ್ರ.
ಬ್ಯಾಟಿಂಗ್‌ಗೆಂದೇ ಹೇಳಿ ಮಾಡಿಸಿರುವ ಮೊಹಾಲಿ ಪಿಚ್‌ನಲ್ಲಿ ಸ್ವಲ್ಪ ಪ್ರಮಾಣದ ಹುಲ್ಲನ್ನು ಉಳಿಸಿ ಬೌಲಿಂಗ್‌ಗೆ ನೆರವಾಗುವಂತೆ ಮಾಡಿರುವುದು ರೋಚಕ ಪಂದ್ಯಕ್ಕೆ ಸಾಕ್ಷಿಯಾ ಗುವುದರಲ್ಲಿ ಸಂಶಯವಿಲ್ಲ.

