dailyvideo

Lekhanagalu

HTML clipboard

ಬುದ್ಧನೆಡೆಗೆ... ಮರಳಿ ಮನೆಗೆ

ಮಾನವ ಜನಾಂಗದ ಒಂದು ವರ್ಗ ಧಾರ್ಮಿಕ ಶೋಷಣೆಗೆ ಒಳಗಾಗಿ ಅಮಾನವೀಯ ಸ್ಥಿತಿ ತಲುಪಿರುವುದು ಜಗತ್ತಿನ ಇತಿಹಾಸದಲ್ಲಿ ಇನ್ನೆಲ್ಲೂ ಸಿಗಲಾರದು. ಇನ್ನಾದರೂ ಜಾತಿ ಜಾತಿ ಎಂಬ ಅನಿಷ್ಠ ಪದ್ದತಿಯನ್ನು ಬಿಟ್ಟು ಜಗತ್ತಿನ ಸ್ವತಂತ್ರ ಮಾನವ ಕುಲವಾಗಿ ಬದುಕುವುದನ್ನು ಕಲಿಯೋಣ. ಧರ್ಮ. ಜಾತಿಯ ಹೆಸರಿನಲ್ಲಿ ಸುಮ್ಮನೆ ದ್ವೇಷ ಸಾಧಿಸುವುದಕ್ಕಿಂತ ನಮ್ಮನ್ನು ನಾವು ತಿದ್ದಿ ನಡೆಯುವುದು ಒಳಿತಲ್ಲವೇ?

ಜಗತ್ತಿನ ಎಲ್ಲಾ ಧರ್ಮಗಳ ಮೂಲಮಂತ್ರ ಸಮಾನತೆ ಮತ್ತು ಭ್ರಾತೃತ್ವ. ಮನುಷ್ಯನಿಗಾಗಿ ಧರ್ಮವಿದೆ. ಮನುಷ್ಯ ತನ್ನ ಒಳಿತಿಗಾಗಿ ಧರ್ಮವನ್ನು ಅವಲಂಭಿಸುತ್ತಾನೆ. ಧಾರ್ಮಿಕ ಆಚರಣೆಗಳು ಬದ್ಧತೆಗಾಗಿ ಸೃಷ್ಟಿಸಿಕೊಂಡ ಅನುಸರಣಾ ವಿಧಾನಗಳು. ಆದರೆ ಕೆಲವು ಧರ್ಮಗಳಲ್ಲಿ ಅದೇ ಪ್ರಧಾನವಾಗಿ ಮನುಷ್ಯನ ವಿಚಾರ ಸ್ವಾತಂತ್ರ್ಯಕ್ಕೆ ಕಂಠಕವಾಗಿ ಸಮಾಜವನ್ನು ಗೊಂದಲಕ್ಕೀಡು ಮಾಡಿದೆ. ಭಾರತದ ಸಂಧರ್ಭದಲ್ಲಂತೂ ಧರ್ಮ ಅಸಂಖ್ಯಾತ ದೇವರುಗಳ ಹಿಡಿತದಲ್ಲಿ ಸಿಕ್ಕಿ ಅಯೋಮಯವಾಗಿದೆ. ಹಿಂದೂ ಎಂದು ಕರೆದುಕೊಂಡು ಜನ ಒಬ್ಬರಿಗೊಬ್ಬರು ಕೊಡು ಕೊಳ್ಳದೆ ಒಂದಾಗದ ಪರಿಸ್ಥಿತಿ ವರ್ಣಾಶ್ರಮ ಮತ್ತು ಜಾತಿ ಪದ್ಧತಿಗಳಿಂದ ನಿರ್ಮಾಣವಾಗಿದೆ. ಒಟ್ಟಿಗೆ ಉಣು ಉಡುವುದಿರಲಿ ತಾವು ಮೇಲು ಇನ್ನೊಬ್ಬ ಕೀಳು ಎಂಬ ಕಲ್ಪಿತ ಶ್ರೇಣಿಕರಣದಿಂದ ಒಬ್ಬರು ಇನ್ನೊಬ್ಬರನ್ನು ಅವಮಾನಿಸುವುದು ನಿರಂತರವಾಗಿ ನಡೆದಿದೆ. ಇದು ಸ್ವಜಾತಿ ಪ್ರೇಮ, ಅನೈತಿಕತೆ, ಭ್ರಷ್ಟಾಚಾರ ಮಿಕ್ಕೆಲ್ಲ ಸಾಮಾಜಿಕ ರೋಗಗಳಿಗೆ ಎಡೆಮಾಡಿ ಕೊಟ್ಟು ಈ ದೇಶವನ್ನು ಹಿಂದುಳಿದ ಸ್ಥಿತಿಯಲ್ಲೇ ನಿಲ್ಲಿಸಿದೆ. ಇಂತಹ ಸಂದಿಗ್ದ ಸ್ಥಿತಿಯಲ್ಲಿ ಕೀಳು ಎನಿಸಿಕೊಂಡವರ ಗೋಳು ಹೇಳ ತೀರದಾಗಿದೆ. ಅದರಲ್ಲೂ ಅಸ್ಪೃಶ್ಯರ ಸ್ಥಿತಿ, ಅವಮಾನ ಮತ್ತು ಹಸಿವುಗಳಿಂದ ಜರ್ಜರಿತವಾಗಿದೆ. ಇತ್ತೀಚೆಗೆ ನ್ಯಾಷನಲ್ ಜಿಯೋಗ್ರಾಫಿಕ್ ಎಂಬ ಅಂತಾರಾಷ್ಟ್ರೀಯ ನಿಯತ ಕಾಲಿಕೆ ಭಾರತೀಯ ಅಸ್ಪೃಶ್ಯರು ಎಂಬ ಲೇಖನವನ್ನು ಪ್ರಕಟಿಸಿ ಈ ದೇಶದ ೨೦ ಕೋಟಿ ಜನ ಅಸ್ಪೃಶ್ಯರ ಹೀನಾಯ ಬದುಕನ್ನು ಪರಿಪರಿಯಗಿ ತೆರೆದಿಟ್ಟಿದೆ. ಇದಕ್ಕೆ ಉತ್ತರ ಒಂದೇ ಬುದ್ದನಿಗೆ ಶರಣಾಗುವುದು. ಮರಳಿ ಮನೆಗೆ ಹೊರಡುವುದು.
 ಭಾರತದ ಜಾತಿ ವ್ಯವಸ್ಥೆಯ ಅಂಧಕಾರದಲ್ಲಿ ಮುಳುಗಿ ಹೋಗಿದ್ದ ದಲಿತ ಲೋಕದಲ್ಲಿ ಸೂರ್ಯನಂತೆ ಉದಯಿಸಿದವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್. ತಮ್ಮ ಜೀವಮಾನವಿಡೀ ದಲಿತ, ಶೋಷಿತ ಸಮುದಾಯದ ಕಣ್ಣು ಕಿವಿಯಾಗಿ ಬದುಕಿದವರು, ನಾಲಿಗೆಯಾಗಿ ಬೆಳೆದವರು. ವಿಚಿತ್ರವೂ, ವಿಕೃತವೂ ಆದ ಜಾತಿ ಪದ್ದತಿಯ ಅಮಾನವೀಯ ಆಚರಣೆಗಳಿಂದ ನೊಂದು ನಲುಗಿದ ಜನಾಂಗವೇ ದಲಿತ ವರ್ಗ. ವಿದ್ಯೆಯಿಂದ ವಂಚಿತರಾದ ದಲಿತರು ಸ್ವಂತ ಆಲೋಚನೆಯಿಂದಲೂ ಶತಮಾನಗಳ ಕಾಲ ದೂರ ಉಳಿದವರು. ಕಾರಣ ಅವರ ಮನದಾಳದಲ್ಲಿ ಕಸಿ ಮಾಡಿದ್ದ ಪಾಪ ಪ್ರಜ್ಞೆ. ವೈದಿಕಶಾಹಿ ಈ ನತದೃಷ್ಟ ಜನ ಕೇಳರಿಯದ, ಕಂಡರಿಯದ ಆ ಸಂಚಿತ ಪಾಪ ವಿಕಾರಗಳು ಜನ್ಮ ಮೂಲವಾದವು ಎಂದು ನಂಬಿಸಲು ಧರ್ಮದ ಲೇಪ ಹಚ್ಚಿ ಸಮಾಜದ ಮುಖ್ಯ ವಾಹಿನಿ ಯಿಂದಲೇ ದೂರ ಮಾಡಿತು. ಜಾತಿವಾದಿಗಳ ಸ್ವಾರ್ಥ, ಸ್ವಹಿತಾಸಕ್ತ ಮೇಲ್ವರ್ಗ, ಹಣ, ಅಧಿಕಾರ, ಗೌರವ ಪ್ರತಿಷ್ಠೆಗಳನ್ನು ತಾವೇ ಅನುಭವಿಸ ತೊಡಗಿದ್ದರು. ಅಂಥ ಕತ್ತಲೆ ಕವಿದ ಜಗತ್ತಿನಲ್ಲಿ ಹೊತ್ತಿದ ಬೆಳಕೇ ಬುದ್ದ. ಇರುವ ಭೂಮಿಯೊಂದನ್ನು ಬಿಟ್ಟು ಸ್ವರ್ಗ ಪಾತಾಳಗಳೆಂಬೆಲ್ಲ ಕರಾಳ ಲೋಕಗಳನ್ನು ಸೃಷ್ಟಿಸಿಕೊಂಡು ಬಂದುದೆಲ್ಲಿಂದ ಹೋಗುವುದೆಲ್ಲಿಗೆ ಎಂದು ಪರಿತಪಿಸುತ್ತಾ ಅಂಡಲೆಯುತ್ತಿದ್ದಮನಸ್ಸುಗಳನ್ನು ನಿಂತ ನೆಲದ ಕಡೆಗೆ ಸಳೆದವನು ಬುದ್ದ. ಆಗ ಹೊತ್ತಿದ ಬೆಳಕು ಇಡೀ ಜಗತ್ತನ್ನು ಪಸರಿಸಿತು. ಏಷ್ಯಾ ಖಂಡವನ್ನೆಲ್ಲಾ ವ್ಯಾಪಿಸಿತು. ಆದರೆ ಜಾತಿ ನಿಷ್ಠರಿಗೆ ಅದು ಬೇಡವಾಯಿತು. ಈ ದೇಶದಲ್ಲಿ ಒಬ್ಬನೇ ಒಬ್ಬ ಭೌದ್ದ ಉಪಾಸಕನ ಹಾಗೂ ಬಿಕ್ಷುವಿನ ತಲೆಯು ಕಾಣದಂತೆ, ಧರ್ಮದ ಒಂದು ಕುರುಹು ಉಳಿಯದಂತೆ ಎಚ್ಚರ ವಹಿಸಿದ್ದರು. ಇತಿಹಾಸಕಾರರೂ ಏನೇ ಹೇಳಲಿ ಅತ್ಯಂತ ಕುರೂಪತೆಯಿಂದ ನರಳುತ್ತಿದ್ದ ಜಾತಿ ಧರ್ಮ ಬುದ್ದನ ತಿರುಳನ್ನು ಅರೆದು ಎರಕ ಹೊಯ್ದುಕೊಂಡು ಹೊಸ ಬರಿಭಾಷೆಯನ್ನು ಬಳಸಲು ಕಲಿಯಿತು ಹಾಗೂ ಸ್ವತಂತ್ರವಾಗಿ ನಿಂತು ನಿರೂಪಿಸಿಕೊಂಡಿತು.
 ಹನ್ನೆರಡನೆಯ ಶತಮಾನದಲ್ಲಿ ಬುದ್ದ ಬೆಳಕನ್ನು ಅನುಸರಿಸಿಯೇ ಸಮಾನತೆಯನ್ನು ಜಪಿಸುತ್ತಾ ಮೂರ್ತಗೊಂಡ ಬಸವಣ್ಣನೆಂಬ ಸಮಾನತೆಯ ಹರಿಕಾರನನ್ನು ಸಹ ಇದೇ ಜಾತಿ ಪ್ರೇಮಿ ಮನುಷ್ಯ ವಿರೋಧಿ ಶಕ್ತಿಗಳು ಆಪೋಶನ ತೆಗೆದುಕೊಂಡವು. ಸುಮಾರು ಎಂಟು ಶತಮಾನಗಳ ಕಾಲ ಬಸವ ಚಳುವಳಿಯ ಕುರುಹುಗಳನ್ನು ಹೂತು ಹಾಕಿದ್ದವು. ಈ ಸಂಧರ್ಭದಲ್ಲಿ ಆಧುನಿಕ ಯುಗದ ಅವತಾರ ಪುರುಷನಂತೆ ಕಾಣಿಸಿಕೊಂಡವರೇ ಅಂಬೇಡ್ಕರ್. ಆ ಹೊತ್ತಿಗೆ ಮನುಧರ್ಮ ಶಾಸ್ತ್ರದ ಕುರುಡು ನಿಯಮ ಗಳಡಿಯಲ್ಲಿ ಅಸ್ತವ್ಯಸ್ತವಾಗಿದ್ದ ಭಾರತೀಯ ಸಮಾಜದ ಶೋಚನೀಯ ಸ್ಥಿತಿಯನ್ನು ನೋಡಿ ಬ್ರಿಟಿಷ್ ಆಡಳಿತ, ಶೂದ್ರರಿಗೂ ವಿದ್ಯೆಯ ಅವಕಾಶವನ್ನು ಒದಗಿಸಿತ್ತು. ದಲಿತ ವಿಮೋಚನೆಯೇ ತಮ್ಮ ಬದುಕಿನ ಅತ್ಯಂತಿಕ ಗುರಿ ಯೆಂದು ಅಂಬೇಡ್ಕರ್ ಶಪಥ ಮಾಡಿ ಶಕ್ತಿ ಮೀರಿ ಓದಿದರು. ಅದುವರೆಗೂ ತನ್ನ ವಂಚಿತ ಜನಾಂಗ ಓದದೇ ಉಳಿಸಿದ್ದ ವಿವಿಧ ಜ್ಞಾನ ಶಾಖೆಯ ಉದ್ಗ್ರಂಥಗಳನ್ನು ಓದೇ ಓದಿದರು. ವಿದ್ಯೆಯ ಮಹಾ ಪರ್ವತವೇ ಆದರು. ದಮನಿತರಿಗೆ ಬಿಡುಗಡೆಯ ಮಾರ್ಗಗಳನ್ನು ತೋರಿದರು. ಈ ಎಲ್ಲಾ ವಿಮೋಚನಾ ಮಾರ್ಗಗಳು ಅಷ್ಟಿಷ್ಟು ಫಲ ನೀಡಿವೆ, ನೀಡುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ. ೧೯೩೫ ರಲ್ಲಿ ಐಯೋಲಾದಲ್ಲಿ ನಡೆದ ಸಮ್ಮೇಳನದಲ್ಲಿ ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ ಎಂಬ ಪ್ರಸಿದ್ದ ಹೇಳಿಕೆಯನ್ನು ಅಂಬೇಡ್ಕರ್ ನೀಡಿದ್ದರು. ಈ ಹೇಳಿಕೆಯ ಹಿಂದಿನ ನೋವನ್ನು, ಬೇಗುದಿಯನ್ನು ಈ ದೇಶದ ಪ್ರತಿಯೊಬ್ಬ ದಲಿತನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಈ ಹೊತ್ತು ದಲಿತರು ಯಾಕೆ ಅಂಬೇಡ್ಕರ್‌ರವರು ಕೊಟ್ಟ ಕರೆಯನ್ನು ಕೇಳಿಸಿಕೊಳ್ಳುತ್ತಿಲ್ಲ ಅಥವಾ ಬುದ್ದಿಪೂರ್ವಕವಾಗಿ ನಿರಾಕರಿಸುತ್ತಿದ್ದಾರೆಯೇ. ಇವರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುವ ಹಿಂದೂ ಧರ್ಮದ ಮೌಲ್ಯಗಳೇನೂ? ಇನ್ನು ಇಂತಹ ಪ್ರಶ್ನೆಗಳನ್ನು ಚರ್ಚೆಗೆ ತೆಗೆದುಕೊಳ್ಳುವ ಅಗತ್ಯತೆ ಇದೆ.
 ಇವತ್ತಿನ ಹಿಂದೂ ಧರ್ಮ ಒಂದು ಹೊಸ ಮುಖವಾಡವನ್ನು ಧರಿಸಿದಂತೆ ಕಾಣುತ್ತದೆ. ವೇದಗಳಲ್ಲಿ ಗೋ ಹತ್ಯೆಯ ಪ್ರಸ್ತಾಪವಿದ್ದರೂ ಇಂದು ಗೋ ಸಂರಕ್ಷಣೆಯ ಮಾತು ಹೆಚ್ಚಾಗಿ ಕೇಳಿ ಬರುತ್ತಿದೆ. ಅಂದರೆ ವೈದಿಕ ಬ್ರಾಹ್ಮಣ ಧರ್ಮ ಕಾಲಾಂತರದಲ್ಲಿ ಹಿಂದೂ ಧರ್ಮವಾಗಿ ರೂಪಾಂತರಗೊಳ್ಳುವ ಪ್ರಕ್ರಿಯೆಯಲ್ಲಿ ಬೌದ್ದ ಧರ್ಮದ ಪ್ರಮುಖ ಬೋಧನೆಯಾದ ಅಹಿಂಸೆಯನ್ನು ಎರವಲು ಪಡೆಯಿತು.
ಇನ್ನು ದಲಿತರು ಕೇವಲ ಮೀಸಲಾತಿಯ ಹೋರಾಟದಲ್ಲೇ ಕಾಲ ಕಳೆವ ಮೂಲಕ ಅಂಬೇಡ್ಕರ್ ಅವರ ನಿಜವಾದ ಧ್ಯೇಯೋದ್ದೇಶಗಳನ್ನು ಮರೆತಂತಿದೆ. ಇಂದಿನ ದಲಿತರು ಚಾತುರ್ವರ್ಣ ಪದ್ದತಿಯಿಂದ ಹೊರಗೆ ಇರುವುದರಿಂದ ಇವರನ್ನು ಪಂಚಮರು ಅವರ್ಣಿಯರು ಎಂದೆಲ್ಲಾ ಕರೆಯಲಾಗುತ್ತದೆ. ಮಾನವ ಜನಾಂಗದ ಒಂದು ವರ್ಗ ಧಾರ್ಮಿಕ ಶೋಷಣೆಗೆ ಒಳಗಾಗಿ ಅಮಾನವೀಯ ಸ್ಥಿತಿ ತಲುಪಿರುವುದು ಜಗತ್ತಿನ ಇತಿಹಾಸದಲ್ಲಿ ಇನ್ನೆಲ್ಲೂ ಸಿಗಲಾರದು. ಇನ್ನಾದರೂ ಜಾತಿ ಜಾತಿ ಎಂಬ ಅನಿಷ್ಠ ಪದ್ದತಿಯನ್ನು ಬಿಟ್ಟು ಜಗತ್ತಿನ ಸ್ವತಂತ್ರ ಮಾನವ ಕುಲವಾಗಿ ಬದುಕುವುದನ್ನು ಕಲಿಯೋಣ. ಇಲ್ಲದಿದ್ದರೆ ಸನಾತನ ಹಿಂದೂ ಧರ್ಮದಲ್ಲಿರುವ ಪ್ರತಿಯೊಬ್ಬ ದಲಿತನು ಕೂಡ ಮತಾಂತರವಾಗುವುದರಲ್ಲಿ ಅನುಮಾನವಿಲ್ಲ. ಧರ್ಮ. ಜಾತಿಯ ಹೆಸರಿನಲ್ಲಿ ಸುಮ್ಮನೆ ದ್ವೇಷ ಸಾಧಿಸುವುದಕ್ಕಿಂತ ನಮ್ಮನ್ನು ನಾವು ತಿದ್ದಿ ನಡೆಯುವುದು ಒಳಿತಲ್ಲವೇ?

Recent Entries

Recent Comments

Photo Gallery