dailyvideo

Chavadi

HTML clipboard

‘ತ್ರೈಶೂಲ್ಯ ಮತ್ತು ಪಂಚಗಾಯತೇ’ ಮತಾಂತರ ಸಾಹಿತ್ಯದ ವಾದ
ವೆಂಕಟೇಶ ರಾವ್, ಅಳಪೆ
ಮಾ ೧೫ ಹಾಗೂ ೧೬ರ ಪತ್ರಿಕೆಯ ಚಾವಡಿ ಅಂಕಣದಲ್ಲಿ ಪ್ರಕಟ ವಾದ ವೆಂಕಟೇಶ ಅವರ ಬರಹಕ್ಕೆ ಪ್ರತಿಕ್ರಿಯೆ.
ನಿಮ್ಮ ಪತ್ರವನ್ನು ಓದಿದಾಗ ಅದು ಯಾವುದೋ ಒಂದು ಪತ್ರಕ್ಕೆ ಪ್ರತಿ ಕ್ರಿಯಿಸಿದಂತೆ ಇತ್ತು. ಅದು ಯಾವ ಪತ್ರ ಎಂದು ಬರೆದಿದ್ದರೆ ನಿಮ್ಮ ಬರಹ ವನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತಿತ್ತು. ಹಾಗಾಗಿ ನಿಮ್ಮ ಮೂಲ ಸಂದೇಶ ಏನು ಎನ್ನುವುದು ಗೊತ್ತಾಗುವುದಿಲ್ಲ. ಪ್ರವಾದಿ ಈಸ ಅವರು ಹಿಂದುವಾಗಿದ್ದರು ಎನ್ನುವುದು ನಿಮ್ಮ ವಾದವೇ? ಅಥವಾ ಮುಸ ಲ್ಮಾನ ರಾಗಿದ್ದರು ಎನ್ನುವುದೇ? ಅಥವಾ ಕ್ರೈಸ್ತರಾಗಿದ್ದರೆಂದೇ? ಒಂದೂ ತಿಳಿಯು ವುದಿಲ್ಲ. ಧರ್ಮದ ಹೆಸರಲ್ಲಿ ವಿಷಬೀಜ ಬಿತ್ತುವ ಕೆಲವು ಮತ ಪಂಡಿತ ಎಂದು ಕರೆದುಕೊಳ್ಳುವ ಕೂಪ ಮಂಡೂಕಗಳೊಂದಿಗೆ ಬಸವಣ್ಣರನ್ನು ಸೇರಿಸಿದ್ದೀರಿ. ಬಸವಣ್ಣನವರು ಒಬ್ಬ ಮಹಾನ್ ದಾರ್ಶನಿಕ. ಅವರು ಜಗತ್ತಿಗೆ ನೀಡಿದ ಮಾನವಧರ್ಮವು ಹೀಗಿದೆ. ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ. ಮುನಿಯಬೇಡ. ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಎದುರು ಹಳಿಯಲು ಬೇಡ. ಇದುವೇ ಅಂತರಂಗ ಶುದ್ಧಿ, ಇದುವೇ ಬಹಿರಂಗ ಶುದ್ಧಿ. ಇದುವೇ ಕೂಡಲ ಸಂಗಮನೊಲಿಸುವ ಪರಿ ಅದೆಷ್ಟು ಸರಳ. ಅದೆಷ್ಟು ಸಂಕ್ಷಿಪ್ತ. ಈ ಮನುಷ್ಯ ಧರ್ಮವನ್ನು ಜಗತ್ತಿನಲ್ಲಿ ಎಲ್ಲರೂ ಪಾಲಿಸಿದ್ದರೆ ಇವತ್ತು ಜಗತ್ತು ಅದೆಷ್ಟು ಶಾಂತವಾಗಿರುತ್ತಿತ್ತು? ಅದೆಷ್ಟು ಸುಂದರವಾಗಿರುತ್ತಿತ್ತು? ಒಮ್ಮೆ ಯೋಚಿಸುವ ವಿಚಾರವಲ್ಲವೇ?
ದೇವರಿಗೆ ಶರಣಾದವರೆಲ್ಲ ಮುಸ್ಲಿಮರಾಗುತ್ತಾರೆ ಎಂದು ನಾನು ಒಪ್ಪುತ್ತೇನೆ ಎಂದು ನೀವು ಬರೆದಿದ್ದರೂ, ದೇವರಿಗೆ ಶರಣಾದವರೆಲ್ಲ ಮುಸ್ಲಿಮರಾಗುವುದಿಲ್ಲ. ಒಬ್ಬ ನೈಜ ಮುಸ್ಲಿಮನಾಗಬೇಕಾದರೆ ಅವನು ದೇವರಿಗೆ ಶರಣಾದರೆ ಸಾಲದು. ಜೊತೆಗೆ ಅವನು ಪವಿತ್ರ ಕುರಾನ್‌ನ್ನು ಒಪ್ಪಬೇಕು. ಅಂತಿಮ ದಿನದಲ್ಲಿ ವಿಶ್ವಾಸವಿಡಬೇಕು. ಮತ್ತು ‘ಜಕಾತ್ನ್ನು ಸಕಾಲದಲ್ಲಿ ಕೊಡಬೇಕು. ಈ ನಿಬಂಧನೆಗಳಿಗೆ ಒಳಪಟ್ಟರೆ ಮಾತ್ರ ಒಬ್ಬ ಮನುಷ್ಯನಾಗಲು ಸಾಧ್ಯ. ಪ್ರವಾದಿ ಏಸುಕ್ರಿಸ್ತರನ್ನು ಮುಸ್ಲಿಮರು ಈಸ ಮಸಿಹ ಎಂದು ಕರೆಯುವುದು ನಿಜವಾ ಗಿರಬಹುದಾದರೂ, ಹಿಂದುಗಳು ಅವರನ್ನು ಗೌರವಿಸಿದರೂ, ಓಂಕಾರರೂಪ ಪರಮೇಶ್ವರ ಎಂದು ನಂಬುವುದಿಲ್ಲ. ಯಾಕೆಂದರೆ ಅವರು ದೇವಪುತ್ರನೇ ಹೊರತು ದೇವರಲ್ಲ. ಸೃಷ್ಟಿಕರ್ತನಲ್ಲ. ಇದನ್ನು ಕ್ರೈಸ್ತರೂ ಒಪ್ಪುತ್ತಾರೆ. ನೀವು ಬರೆದ ಶುಕ್ಲ ಯಜುರ್ವೇದ ಅಧ್ಯಾಯಗಳು ಯಜ್ಞ ಯಾಗಾದಿಗಳಲ್ಲಿ ನಡೆಸುವ ವಿಧಿ ವಿಧಾನಗಳನ್ನು ಹೇಳುತ್ತವೆ. ನೀವು ಹೇಳುವ ಅಧ್ಯಾಯಗಳಲ್ಲಿ ‘ಪುರುಷ ಮೇಧ, ಸರ್ವ ಮೇಧ, ಪಿತೃ ಯಜ್ಞ ಮತ್ತು ಪ್ರವರ್ಗ್ಯ ಎಂಬ ಅಧ್ಯಾಯಗಳಿದ್ದು, ಪುರುಷಮೇದದಲ್ಲಿ ಮನುಷ್ಯನನ್ನು ಸಾಂಕೇತಿಕವಾಗಿ ಯಾಗಕ್ಕೆ ಆಹುತಿ ಕೊಡುತ್ತಾರೆಯೇ ವಿನಃ ದೈಹಿಕವಾಗಿ ಅಲ್ಲ. ನೀವು ಬರೆದ ಶ್ಲೋಕ/ ಮಂತ್ರಗಳು ಅದಕ್ಕೆ ಸಂಬಂಧಿಯಾಗಿರಬೇಕೇ ಹೊರತು ಅದಕ್ಕೂ ನೀವು ಬರೆದ ಯಜ್ಞಕ್ಕೆ ಏನೂ ಸಂಬಂಧವಿಲ್ಲ. ಯಜುರ್ವೇದದ ‘ತ್ರೈಶೂಲ್ಯ ಮತ್ತು ಪಂಚಗಾಯತೇ ನಮಃ ಎಂಬ ಶಬ್ದವನ್ನು ಏಸು ಕ್ರಿಸ್ತರಾಗಿರಬಹುದು ಎಂದು ಬರೆದಿದ್ದೀರಿ. ಇದು ಕೇರಳದಲ್ಲಿ ಹಿಂದುಗಳನ್ನು ಮತಾಂತರಿಸಲು ಕ್ರೈಸ್ತರು ಹೊರತಂದಿರುವ ಕಿರುಹೊತ್ತಿಗೆಯಲ್ಲಿ ಬರುವ ಶಬ್ದಗಳು. ಅದನ್ನೇ ನಮ್ಮಲ್ಲಿ ಕನ್ನಡಕ್ಕೆ ಅನುವಾದಿಸಿ ಹೊರತಂದ, ಇತ್ತೀಚೆಗೆ ಚರ್ಚ್ ದಾಳಿಗೆ ಕಾರಣವಾದ ವಿವಾದಿತ ಪುಸ್ತಕದಲ್ಲಿ ಬರುವ ವಾದ. ಇಲ್ಲಿ ಗಮನಾರ್ಹವಾದ ಸಂಗತಿ ಎಂದರೆ ಒಂದು ಶಬ್ದದ ನಿಜವಾದ ಅರ್ಥ ಬೇಕಿದ್ದರೆ ಅದಿರುವ ಪೂರ್ಣ ವಾಕ್ಯವನ್ನು ಓದಬೇಕಾಗುತ್ತದೆ. ಇಲ್ಲದಿದ್ದರೆ ಅದು ಅಪಾರ್ಥಕ್ಕೆ ಕಾರಣವಾಗುತ್ತದೆ. ಸಂಸ್ಕೃತದಲ್ಲಿ ನನಗೆ ತಿಳಿದಂತೆ ‘ಗಾಯ ಎಂಬ ಸ್ವತಂತ್ರ ಶಬ್ದ ಇಲ್ಲ. ಮಾತ್ರವಲ್ಲ ಯೇಸುಕ್ರಿಸ್ತರು ಜನಿಸುವ ಸಾವಿರಾರು ವರ್ಷಗಳ ಹಿಂದೆ ರಚಿಸಿದ ಗ್ರಂಥ ವೇದ. ಅದರಲ್ಲಿ ಏಸು ಕ್ರಿಸ್ತರ ಬಗ್ಗೆ ಬರಲು ಸಾಧ್ಯವಿಲ್ಲ. ಇಲ್ಲವಾದರೆ ಏಸುಕ್ರಿಸ್ತರನ್ನು ಹಿಂದು ಎಂದು ಹೇಳಿದ ಹಾಗಾಗುತ್ತದೆ.
ತೌರಾಕ್, ಝಬುರ್, ಬೈಬಲ್/ಈಂಜಿಲ್ ಈ ಗ್ರಂಥಗಳನ್ನು ಅಲ್ಲಾಹನು ಮಸೀಹ ಈಸರಿಗೆ ಕೊಡುತ್ತಾನೆ ಎಂದಿದ್ದೀರಿ. ಹೌದು ಈ ಗ್ರಂಥಗಳನ್ನು ಗೌರವಿಸಬೇಕು ಎಂದು ಕುರಾನ್ ಹೇಳುತ್ತದೆ. ಅಂದರೆ ಆ ಮೂರೂ ಗ್ರಂಥಗಳು ಅಧಿಕೃತ ‘ಲಾ ಇಲಾಹಿ ಇಲ್ಲಲಾಃ ಅಂದರೆ ಅಲ್ಲಾಹನಲ್ಲದೆ ಬೇರೆ ದೇವರಿಲ್ಲ ಎಂದು ಪವಿತ್ರ ಕುರಾನ್ ಹೇಳಿದರೆ (ನೀವು ಬರೆದ ಹಾಗೆ) ಮತ್ತಾಯ ೨೨.೩೭-೪೦ರಲ್ಲಿ ನಿನ್ನ ದೇವರಾದ ಕರ್ತನನ್ನು ಪ್ರೀತಿಸು ಎಂದಿದೆ. ಯೊಹಾನ : ೩:೧೬ರಲ್ಲಿ ದೇವರು ತನ್ನ ಒಬ್ಬನೇ ಮಗನನ್ನು ಕೊಟ್ಟನು ಎಂದಿದೆ ಅಂದಿದ್ದೀರಿ. ಇಸ್ಲಾಮಿನ ಪ್ರಕಾರ ದೇವರಿಗೆ ಸಂತಾನವಿಲ್ಲ. ಅದೇ ರೀತಿ ಮತ್ತಾಯಿಯಲ್ಲಿ ಕರ್ತನನ್ನು ಪ್ರೀತಿಸು ಎಂದಿದೆ. ಅಲ್ಲಾಹನನ್ನು ಪ್ರೀತಿಸು ಎಂದಿಲ್ಲ. ಹಾಗೆಯೇ ಬೈಬಲ್ಲಿನಲ್ಲಿ ಎಲ್ಲಿಯೂ ಮುಸ್ಲಿಂ ಎಂಬ ಶಬ್ದ ಪ್ರಯೋಗವಾಗಿಲ್ಲ ಎಂದು ನನ್ನ ಅನಿಸಿಕೆ. ಇಸ್ಲಾಮಿನ ಪ್ರಕಾರ ಈಸರನ್ನು ಕುರುಸಿಗೇರಿಸಲಿಲ್ಲ. ಬದಲಾಗಿ ಅದರ ಮೊದಲೇ ಅಲ್ಲಾಹನು ಅವನನ್ನು ದೇಹ ಸಮೇತ ಸ್ವರ್ಗಕ್ಕೆ ತೆಗೆದುಕೊಂಡು ಹೋದನು (೪:೧೫೭-೧೫೮). ಆದರೆ ಬೈಬಲ್ ಪ್ರಕಾರ ಯೇಸುವನ್ನು ಕುರುಸಿಗೇರಿಸಲಾಗಿತ್ತು. ಮತ್ತು ೩ನೇ ದಿನ ಯೇಸು ಅವರು ಮರಳಿ ಜೀವಂತವಾಗಿ ಬರುತ್ತಾರೆ. ಇದನ್ನು ಕ್ರೈಸ್ತ ಧರ್ಮೀಯರು ಗುಡ್ ಫ್ರೈಡೆ ಮತ್ತು ಈಸ್ಟರ್ ಸಂಡೆ ಎಂದು ಆಚರಿಸುತ್ತಾರೆ. ಕುರಾನಿನ ಬೆಳಕಲ್ಲಿ ಈ ಆಚರಣೆಯು ಹಾಸ್ಯಾಸ್ಪದವಾಗುತ್ತದೆ. ಒಬ್ಬ ಪ್ರವಾದಿಯ ಹೆಸರು ವೃತ್ತಾಂತ ಪ.ಕುರಾನ್‌ನಲ್ಲಿದ್ದು ಅವನು ಸೃಷ್ಟಿಕರ್ತನನ್ನು ‘ನೀನೊಬ್ಬನೇ ದೇವರು ಎಂದು ಹೇಳಿದೆ ಎಂದು ಬರೆದಿದ್ದರೆ ಅವನು ಮುಸ್ಲಿಮ ಎಂದು ಆಗ ಬೇಕೆಂಬ ಅವಶ್ಯಕತೆ ಇಲ್ಲ. ಅವನು ಕ್ರೈಸ್ತನೂ ಆಗಬಹುದಲ್ಲವೇ? ಹೇಗೆ ಪ್ರವಾದಿ ಮಹಮ್ಮದ್ (ಸಅ) ರವರ ಬಗ್ಗೆ ಪವಿತ್ರ ಕುರಾನಿನಲ್ಲಿ ಇದ್ದದ್ದೇ ಅಂತಿಮ ಸತ್ಯವಾದರೆ ಈಸಮಸೀಹರ ಬಗ್ಗೆ ಹೋಲಿ ಬೈಬಲ್ಲು/ಸತ್ಯವೇದ/ಗೋಸ್ಪೆಲ್‌ಗಳಲ್ಲಿ ಹೇಳಿದ್ದೇ ಅಂತಿಮ ಸತ್ಯವಾಗುತ್ತದೆ. ಬೈಬಲ್ಲಿನಲ್ಲಿರುವವ ಸೃಷ್ಟಿಯಿಂದ ಹಿಡಿದು ಏಡಂ ದಂಪತಿಯವರು ಹಳೆ ಒಡಂಬಡಿಕೆಯಿಂದ ಹೊಸ ಒಡಂಬಡಿಕೆಗಳವರೆಗೆ ಎಲ್ಲೂ ಇಸ್ಲಾಮಿನ ಬಗ್ಗೆ ಉಲ್ಲೇಖವಿಲ್ಲದಿರುವಾಗ ಪ್ರವಾದಿ ಈಸ/ ಜೀಸಸ್ ಕ್ರೈಸ್ಟ್ ಮುಸ್ಲಿಮ ರಾಗಿದ್ದರು ಎನ್ನುವುದು ಹಾಸ್ಯಾಸ್ಪದವಾಗುತ್ತದೆ. ಪವಿತ್ರ ಕುರಾನ್‌ನಲ್ಲಿ ಕೂಡಾ ಪ್ರವಾದಿ ಈಸಾರನ್ನು ದೇವರ ಪ್ರತಿನಿಧಿಯಾಗಿ ಇಸ್ರಾಯಿಲರ ಬಳಿಗೆ ಕಳುಹಿಸಲಾಗಿದೆ ಎಂದಿದೆ (೩-೪೯) ನಾವು ಕುರಾನ್‌ನನ್ನು ಓದುವಾಗ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅರಬ್ಬಿ ಭಾಷೆಯಲ್ಲಿ ಅಲ್ಲಾಹ ಎಂದರೆ ‘ದೇವರು, ಸೃಷ್ಟಿಕರ್ತ ಎಂದರ್ಥ. ಹಾಗಾಗಿ ಅಲ್ಲಾಹ್ ಅಂದರೆ ಕ್ರೈಸ್ತರಿಗೂ ದೇವರೇ, ಹಿಂದುಗಳಿಗೂ ದೇವರೇ (ಇದು ತಪ್ಪಾಗಿದ್ದರೆ ದಯವಿಟ್ಟು ತಿಳಿಸಿ) ಅದೇ ಅಲ್ಲಾಹನಿಗೆ ಪವಿತ್ರ ಕುರಾನ್‌ನಲ್ಲಿ ಒಂದು ವ್ಯಕ್ತಿತ್ವವನ್ನು ಕೊಟ್ಟು ಇದು ನಿಜವಾದ ಸೃಷ್ಟಿಕರ್ತ ಎಂದು ವಾದಿಸುತ್ತಿದ್ದಾರೆ ಅಷ್ಟೆ. ಯಾವೊಬ್ಬ ಮುಸ್ಲಿಮನಲ್ಲದವನೂ ದೇವರನ್ನು ಅರಬ್ಬಿ ಭಾಷೆಯಲ್ಲಿ ಅಲ್ಲಾಹ ಎಂದೇ ಕರೆಯುತ್ತಾನೆ. ಕರೆಯಬೇಕಾಗುತ್ತದೆ. ಇದೆಲ್ಲಾ ಕಾರಣಗಳಿಂದಾಗಿ ಈಸಾರನ್ನು/ ಜೀಸಸ್‌ರವರನ್ನು ಮುಸ್ಲಿಂ ಪ್ರವಾದಿ ಎನ್ನುವುದು ಸರಿಯಲ್ಲ.
ಸತ್ಯವನ್ನು ಸುಲಭವಾಗಿ ಅರಿಯಲು ಸಾಧ್ಯವಿಲ್ಲ. ಎಲ್ಲಾ ಪೂರ್ವಾಗ್ರಹಗಳನ್ನು ಬಿಟ್ಟು ಹುಡುಕಬೇಕಾಗುತ್ತದೆ. ಹೆಚ್ಚಾಗಿ ನಾವು ‘ನಾನು ತಿಳಿದದ್ದೇ ಸತ್ಯ ಎಂದು ಭ್ರಮಿಸುತ್ತೇವೆ ಅಷ್ಟೆ.

Recent Entries

Recent Comments

Photo Gallery